ದ್ವೇಷ ಸಾರ್ಥಗಳ ಪ್ರೀತಿ ಮಾಯೆ
ಕರಿನೆರಳ ಕನವರಿಕೆ ಕಾಣದ ಸುಳಿವು
ಹೃದಯದ ಪದರದಿ ವಿಷದ ಛಾಯೆ
ಆತನಿಗಿಲ್ಲ ಕೊಲೆಯಾದ ಅರಿವು
ಕುಡಿನೋಟ ಬಳಸಿ ಸೆರೆಯಾದ ಗಳಿಗೆ
ಮೋಹದ ಪಾಶಕ್ಕೆ ಬಿಟ್ಟಿರದ ಚಡಪಡಿಕೆ
ಕಣ್ಣ ಕಂಬನಿಯಲ್ಲಿ ಕಣ್ಣೀರ ಉಳಿಕೆ
ಹೃದಯ ಸಾಮ್ರಾಜ್ಯಕ್ಕೆ ಅವಳದೆ ಆಳ್ವಿಕೆ
ಅಂತರಂಗ,ಬಹಿರಂಗದ ಅಗ್ನಿಜ್ವಾಲೆ
ಭಯವಿಲ್ಲದೇ ನುಡಿ ಬಯಲಾಗದ ಸತ್ಯ
ಸಿಡಿಲಾಗಿ ಅಪ್ಪಳಿಸಿದೆ ವಂಚನೆಯ ಅಲೆ
ನಿನಗಾಗಿ ಧಾರೆಯೆರೆದ ಪ್ರೀತಿಯ ಸತ್ಯ
Posted in ಕವನ | Leave a Comment »
ಅದೇಕೊ ಗೊತ್ತಿಲ್ಲ,ಅವರಿಬ್ಬರ ಬಗ್ಗೆ ಬರೆಯದೆ ತುಂಬಾ ದಿನಗಳಾದವು.ಇಂದು ನನ್ನೊಳಗಿನ ಸೂತಕದ ಛಾಯೆಯನ್ನು ಬದಿಗೊತ್ತಿ ಅವರಿಗಾಗಿ ಬರೆಯುತ್ತಿದ್ದೇನೆ.ಹೀಗೆ ಬರೆಯುವಾಗ ನಾನು ದೀಕ್ಷಾಬದ್ದ ಹುಡುಗಿ.ಆ ಪುಟ್ಟ ಪೋರಿಯ ಮನಸಿನಲ್ಲಿ ಪ್ರೀತಿ ಎಂಬ ಬಣ್ಣ ಕೊಟ್ಟು ಮನಸೆಳೆದ ಪರಿಯ ಮರೆಯುವುದಾದರೂ ಹೇಗೆ?
ಇಂದು ಅವಳಿಗೆ ಅನಿಸಿರಲಿಕ್ಕಿಲ್ಲ.ತಾನು ಅದೇ ಗುಂಗಿನಲಿ ತನ್ನುನ್ನು ಕಳೆದುಕೊಳ್ಳುವುದಲ್ಲದೇ ತನಗಿಂತ ಹೆಚ್ಚು ಪ್ರೀತಿಸಿದವರನ್ನು ದೂರವಿಡುತ್ತಿದ್ದೇನೆ ಎಂದು.ಕಾರಣ ,ಎಲ್ಲರಿಗಿಂತ ಅವನೇ ಮೇಲು.
ಕಣ್ಣ ಮುಂದೆ ಕನ್ನಡಿಯೊಂದು ಬಂದಾಗ ಪ್ರೀತಿ ಎಂಬುದು ಸತ್ಯ.
ಮುಂದೊಂದು ದಿನ ಮೂಡಿದ ಬೆಳ್ಳಿ ನೆರಿಗೆಗಳು ಕಂಡಾಗ ಮಿತ್ಯ.
ಅವಳು ಪ್ರತಿ ಮುಂಜಾವಿನಲಿ ಮುಂಗುರುಳ ತುದಿಯಲಿ ಹೆಣೆದ ಭಾವನೆಗಳಿಗೆ ನಾ ನಿಲ್ಲಿ ಅರ್ಥ ನೀಡಿದ್ದೇನೆ. ಇದು ನಿರಂತರವೋ,ಆಕಸ್ಮಿಕವೋ ನನಗೀಗ ತೋಚದು.ಕಾಲಘಟ್ಟದ ಮುಂದೆ ಅವಳು ಪ್ರೀತಿಯ ಸವಾಲುಗಳನ್ನು ಎದುರಿಸಲು ಸಿದ್ದವಾದಂತೆ ತೋರುತ್ತಿದೆ.
ಎಲ್ಲಿಂದ ಪ್ರಾರಂಭಿಸಲಿ ಗೆಳತಿ,ಮೊದಲ ಮಳೆಯಲ್ಲಿ ಬೊಗಸೆಯಲ್ಲಿ ಹಿಡಿದ ಬಿಂದುವಿನಿಂದಲೋ?ಕರಗುತ್ತಿರುವ ಮೊಂಬತ್ತಿಯ ಬೆಳಕಿನಿಂದಲೋ?ಹೇಳುತ್ತೇನೆ ಅವನ ಬಗ್ಗೆ ನೀ ಇಟ್ಟ ನಂಬಿಕೆ.ಕಡಲ ತಡಿಯ ಮೇಲೆ ಪುಟ್ಟ ಮಗುವೊಂದು ಅಂಗಾಲಿಗೆ ತಾಕಿ ಗಿಲಿಗಿಲಿಯುಕ್ಕಿದಾಗ ನೆನಪಾದ ಗೆಳೆಯ ನೀನು.ನಿನ್ನ ಮುಂದೆ ಸದಾ ನನಗೆ ಸೋಲು .ನೀ ಅಂದುಕೊಂಡಿದ್ದಕ್ಕಿಂತ ಹೆಚ್ಚು ಪ್ರೀತಿಸಿದವಳು ನಾನು.ನಿನ್ನ ಹಣೆಗೊಂದು ವಿಶ್ವಾಸದ ಮುತ್ತು.ಬದುಕಿನ ಜಂಜಾಟಗಳಲ್ಲಿ ನೀ ಕಳೆದು ಹೋಗುವಾಗಲೇ ಕಣ್ಣಲ್ಲಿ ನೀರು.ನೀ ಕೊಟ್ಟ ಪ್ರೀತಿಯ ಸಾಂತ್ವನಕ್ಕೆ ಅಂದೇ ಮುನ್ನುಡಿಯ ಬರೆದಿದ್ದೆ.ಕನಸು ಕಟ್ಟಿ ನಿನ್ನ ಬಂಧನದಲ್ಲಿ ಬಂಧಿಯಾಗಿದ್ದೇನೆ.ಹೇಳು ಗೆಳೆಯ ಯಾವ ಅಪರಿಚಿತ ದಾರಿಯ ನೆರಳು?ಯಾವ ಜನ್ಮದ ಹೊರಳು?ಏಕೆ ನೀ ಬೆಳಗಿನ ಜಾವದ ನಕ್ಶತ್ರದಂತೆ ಕಾಡುತ್ತಿರುವೆ?ಇವೆಲ್ಲಾ ಕೇವಲ ಇಂದು ಪ್ರಶ್ನೆಗಳೇ ಹೊರತು ನಿನ್ನಲ್ಲಿ ಉತ್ತರವಿಲ್ಲ.
ಆದರೆ ನನ್ನಲ್ಲಿ ಉತ್ತರವಿದೆ.ನಿನ್ನ ಕಣ್ಣ ಸಂಚಿನ ಕುಡಿನೋಟದ ಎದುರು ಮಿಂಚಾಗಿದ್ದೇನೆ.ಅಂದು ಏನು ಘಟಿಸೀತು ಹೇಳು?ನೀರೋಳಗೆ ವೀಣೆ ನುಡಿಸಿದಂತೆ ಆಡಿದ ಮಾತುಗಳು ತಾನೇ?ಸಾಕು ಈ ಜನ್ಮಕ್ಕೆ ನಾನು ಹಾಯಾಗಿರಲು.ನಾವು ಎದುರಿಗೆ ಕುಳಿತುಕೊಂಡೆ ಮಾತಾನಾಡಬೇಕೆಂಬ ನಿಯಮವೆನಿಲ್ಲ.ನೀನು ಶುದ್ದ ಮೈ ಮರೆವಿನ ತಂಪಿನಲಿ ಹಾಡಿದ ಮಧುರ ಭಾವ ನನ್ನ ಕಿವಿಗೆ ಇಂಪಾಗಿಸಬಲ್ಲದು . ಕಿಟಕಿಯಾಚೆ ಕುಳಿತು ಮೇಘ ಸಂದೇಶ ಕಳಿಸುತ್ತಲೇ ಇರು.ಅದನ್ನು ಕದ್ದು ಓದುವಾಗಲೇ ನನಗೆ ಸಂಭ್ರಮ.
ಹೆಚ್ಚೇನು ಹೇಳಲಾರೆ.ಅಚ್ಚೋತ್ತಿವೆ ನಿನ್ನ ನೆನಪುಗಳು.ಮತ್ತೆ ಕಾಡುತಿದೆ ನೀ ಹೋದ ಹೆಜ್ಜೆ ಗುರುತುಗಳು.ನಿನ್ನ ಗೂಡಿನಲಿ ಬೆಚ್ಚಗಿರು.ನೀ ಕೊಟ್ಟ ಮಾತು ನನ್ನಲ್ಲಿ ಉಳಿದು ಹೋಗಿದೆ.ಮತ್ತೇಕೆ ಭಯ.ಒಂದು ದಿನ ಗರಿಗೆದರುವ ಪ್ರೀತಿಗೆ ಹಣೆಪಟ್ಟಿ ಕೊಡಬೇಕಾದ ಗಳಿಗೆ.ನಮ್ಮ ಗುಪ್ತಗಾಮಿನಿಯಂತ ಪ್ರೀತಿಗೆ ಯಾರು ತಡೆಕಟ್ಟಲಾರರು.ಅದು ಎಂದಿಗೂ ಬತ್ತಲಾರದು.ನಿನ್ನ ಇಚ್ಚೆಯಂತೆ ನಾ ಬದುಕುತ್ತಿದ್ದೇನೆ.ಪ್ರೀತಿಯ ವಾರಿಧಿಗೆ ಅಪ್ಪಳಿಸಿ ದಡ ಸೇರುತ್ತೇನೆ ಎಂಬ ಹುಚ್ಚು ಕಲ್ಪನೆಯೊಂದಿಗೆ ನಿನ್ನವಳಾಗಿದ್ದೇನೆ.
ಹೀಗೆ ಬರೆಯುತ್ತಾ ಹೋದರೆ ಕಾಲ್ಪನಿಕವೆನಿಸಿಬಿಡುತ್ತದೆ.ಆದರೆ ಅದನ್ನೆ ನಿಜವೆಂದು ತಿಳಿದು ಸಂಭ್ರಮಿಸುತ್ತಿರುವ ಮುಗ್ದ ಮನಸಿನ ಕಟ್ಟೆಯು ಯಾವಾಗ ಒಡೆದು ಹೋಗುತ್ತದೆಯೋ ಗೊತ್ತಿಲ್ಲ.ಆ ಶಕ್ತಿಯನ್ನು ಬರಮಾಡಿಕೊಳ್ಳುವ ಗಟ್ಟಿತನ ಆಕೆಗೆ ಇಲ್ಲ.ಹೇಳಿ ಹೋಗುವ ಕಾರಣಕ್ಕೆ ಅರ್ಥ ಕೊಡಬಹುದು.ಮುಂಬಾಗಿಲಿನ ಮೂಡಣಕ್ಕೆ ಮುಖವಿತ್ತು ಅವನ ಬರುವಿಕೆಗಾಗಿ ಕಾಯುತ್ತಿದ್ದಾಳೆ.ಅವಳಿಗೂ ಗೊತ್ತು ಅವನು ಮರೀಚಿಕೆ.ಇದಕ್ಕೆ ಹೇಳುವುದು ಎರಡು ಪದದ ನಡುವೆ ಎಲ್ಲರೂ ಸಣ್ಣವರಂತೆ ತೋರುತ್ತಾರೆ.ಅವಳ ಮನಸ್ಸನ್ನು ಕದ್ದು ಹೋದ ಹುಡುಗ ಇನ್ನು ಮೂರು ವಸಂತದ ಬಳಿಕ ಅವಳೆದುರು ಬಂದು ನಿಲ್ಲುತ್ತಾನ ಎಂಬುದನ್ನು ಎದುರು ನೋಡಬೇಕಿದೆ.ಅಲ್ಲಿಯ ತನಕ ಈ ಪುಟಕ್ಕೆ ಅಂತ್ಯ ಕಾಣಿಸುತ್ತಿದ್ದೇನೆ.ಆ ನಂತರ ಅವನಿಗೊಂದು ಅಮೂರ್ತ ರೂಪ ನೀಡುತ್ತೇನೆ.ಅಲ್ಲಿಯ ತನಕ ಮುಂಜಾವಿನ ಪ್ರೀತಿಯ ಸುಧೆಯನ್ನು ಸವಿಯುತ್ತಿರಲಿ ಆ ಹುಡುಗಿ.
Posted in ಸುಮ್ಮನೆ ಬರೆದವು | Leave a Comment »