ಪೂರ್ಣಿಮೆಯ ಬೆಳಂದಿಗಳಲ್ಲಿ ಕವಿದ ಕತ್ತಲೆ
ಆಗಷ್ಟ್ 2, 2012 ನಿನಗಾಗಿ ಬರೆದಿರುವೆ ಮೂಲಕ
ಸಾವು ಎನ್ನುವುದು ಈ ಜಗತ್ತಿನಲ್ಲಿ ಇಲ್ಲದಿದ್ದರೆ ಏನಾಗುತ್ತಿತ್ತು ಎಂಬ ಪ್ರಶ್ನೆ ತರ್ಕಕ್ಕೆ ನಿಲುಕದ್ದು. ಹುಟ್ಟನ್ನು ನಿರೀಕ್ಷಿಸಬಹುದು ಆದರೆ ಸಾವಿನ ಮುನ್ಸೂಚನೆ ಯಾರಿಗೆ ತಾನೇ ತಿಳಿಯುತ್ತದೆ? ಮನುಷ್ಯ ಸಾಯುತ್ತಾನೆ ಎಂದು ಗೊತ್ತಾದಾಗ ಮನದಾಳದ ನೋವು, ತನ್ನವರನ್ನು ಬಿಟ್ಟುಹೋಗುವಾಗ ಮುಖದಲ್ಲಿ ಮಡುಗಟ್ಟಿದ ಮೌನ, ಹತಾಶೆ, ಯಾರಿಂದಲೂ ಸಹಿಸಲಾಗದು. ಇದು ಬದುಕಿನ ಮುಗಿದ ಅಧ್ಯಾಯ. ಅರ್ಥಾತ್ ಬದುಕಿದ್ದವರ ಜೊತೆ ಸಂಬಂಧಗಳ ಕೊಂಡಿಯನ್ನು ಕಳಚಿಕೊಳ್ಳುವ ಕೊನೆಯ ಗಳಿಗೆ.
ಕೆಲವರ ಪಾಲಿಗೆ ಬಂದೋದಗುವ ಬದುಕಿನ ದುರಂತವನ್ನು ಸ್ವೀಕರಿಸುವುದು ಸವಾಲೇ ಸರಿ. ತನಗೆ ಯಾವುದೋ ಒಂದು ಕಾಯಿಲೆ ಇದೆ. ಇನ್ನು ತಾನು ಬದುಕುವುದಿಲ್ಲ ಎಂದು ಗೊತ್ತಾದಾಗ ಅಸಹಾಯಕತೆ, ದುಃಖವನ್ನು ನೀಗಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಹೇಳದೆ ಕೇಳದೆ ಸಾವು ಬರುವುದು ಒಂದರ್ಥದಲ್ಲಿ ಉತ್ತಮ. ಆದರೆ ಹಲವು ಸಲ ಕೆಲ ಸಾವನ್ನು ನುಂಗಿಕೊಳ್ಳುವುದು ಕಷ್ಟ. ಪೂರ್ಣಿಮಾ ಮೇಡಂ ಸಾವು ನನ್ನ ಪಾಲಿಗೆ ಅಂಥ ಸಾವುಗಳಲ್ಲೊಂದು.
ಸಾವನ್ನೇ ಸವಾಲಾಗಿ ಸ್ವೀಕರಿಸಿದವರು ನಮ್ಮೆಲ್ಲರ ಆತ್ಮೀಯರಾದ ಪೂರ್ಣಿಮಾ ಮೇಡಂ. ಬದುಕಿನ ಪಾಠ ಹೇಳಿಕೊಟ್ಟ ಮೊದಲ ಗುರುಗಳು ಅವರು. ಅವರ ಕಣ್ಣಲ್ಲಿ ಸದಾ ನಾನು ಗಮನಿಸುತ್ತಿದ್ದು ಆತ್ಮೀಯತೆಯ ಮನೋಭಾವ.ಇನ್ನೊಂದು ಅವರ ಮುಖದಲ್ಲಿನ ಮಂದಹಾಸ.ಕಣ್ಣಂಚಿಗೆ ಬಳಿದುಕೊಳ್ಳುತ್ತಿದ್ದ ಕಾಡಿಗೆ,ತುಟಿಯ ಮೇಲೆ ಲೇಪಿಸುತ್ತಿದ್ದ ಕೆಂಪು ಬಣ್ಣ,ಉಡುಪಿಗೆ ತಕ್ಕಂತೆ ಅದೇ ತರಹದ ಬಣ್ಣದ ಮ್ಯಾಚಿಂಗ್ ವಾಚ್,ಚುರುಕಿನ ನಡಿಗೆ,ಪಟ ಪಟನೆ ಆಡುವ ಮಾತು,ನಮ್ಮನ್ನು ಆಕರ್ಷಿಸಿತ್ತು. ಅವರು ತರಗತಿಯ ಕಡೆ ಬರದೇ ಇದ್ದರೆ ಅವರ ಛೇಂಬರ್ ಬಳಿ ಹೋಗಿ ವಿಚಾರಿಸುತ್ತಿದ್ದೆವು.ಕಾರಣ ಇಷ್ಟೇ ಯಾವ ರೀತಿ ಮ್ಯಾಚಿಂಗ್ ಮಾಡುತ್ತಿದ್ದರೆಂದು ನೋಡಬೇಕಾಗಿತ್ತು.
ನಾನು ಅವರನ್ನು ಎಲ್ಲ ಉಪನ್ಯಾಸಕರುಗಳಂತೆ ಪರಿಗಣಿಸಲಿಲ್ಲ. ಇದಕ್ಕೆ ಕಾರಣವೆಂದರೆ,ಸಾಮಾನ್ಯವಾಗಿ ಪಿ.ಯು.ಸಿ ಮುಗಿಸಿ ಬಂದ ಮೇಲೆ ಡಿಗ್ರಿಯಲ್ಲಿ ಕನ್ನಡ ಎನ್ನುವುದು ಮರೀಚಿಕೆ ಆದಂತೆ. ಸಾಗರದ ಸುತ್ತಮುತ್ತಲಿನಹಳ್ಳಿಗಾಡಿನ ವಿದ್ಯಾರ್ಥಿಗಳು ಕನ್ನಡ ಮಿಡಿಯಂನಿಂದ ಬಂದವರು.ಅದರಲ್ಲಿ ನಾನು ಒಬ್ಬಳು.
ಅವರು ಮೊದಲ ದಿನ ತರಗತಿಯಲ್ಲಿ ವಿದ್ಯಾರ್ಥಿಗಳ ಪರಿಚಯ ಮಾಡಿಕೊಳ್ಳುವಾಗ ನನಗೆ ಒಮ್ಮೆಲೆ ಭಯ ಬೇರೆ.ಮೊದಲೇ ಇಂಗ್ಲೀಷ್ ಬರುವುದಿಲ್ಲ.ನನ್ನ ಬಗ್ಗೆ ಪರಿಚಯ ಮಾಡಿಕೊಂಡರೆ ನಗಬಹುದು ಎಂದು ಊಹಿಸಿ ತೆಪ್ಪಗಾಗಿದ್ದೆ.ಮುಂದಿನ ಪಾಳಿ ನನ್ನದು ಬಂದೆ ಬಿಟ್ಟಿತು.ಎನಾದರೂ ಆಗಲಿ ಎಂದು ನನ್ನ ಬಗ್ಗೆ ಒದರಿಬಿಟ್ಟೆ.ಕೆಲವೊಂದು ವಾಕ್ಯಗಳನ್ನು ತಪ್ಪು ಹೇಳಿಯೂ ಆಯಿತು.ಕೆಲವರು ನಕ್ಕರು.ಇನ್ನು ಕೆಲವರು ಹೀಯಾಳಿಸಿದರು,ನನ್ನ ಕಣ್ಣುಗಳು ಹಲವಾರು ವಿದ್ಯಾರ್ಥಿಗಳ ಮುಂದೆ ತೇವಭರಿತವಾದವು.ಆದರೆ ಪೂರ್ಣಿಮಾ ಮೇಡಂ ನನ್ನ ಹೆಗಲ ಸ್ಪರ್ಶಿಸಿ ನಗುವವರ ನಾನು ನಿನ್ನ ಜೊತೆ ಇದ್ದೇನೆ.ಇನ್ನೊಮ್ಮೆ ನಾನು ಹೇಳಿಕೊಟ್ಟ ಹಾಗೆ ಹೇಳು ಎಂದು ವಾಕ್ಯಗಳನ್ನು ಜೋಡಿಸಿಕೊಟ್ಟರು.ಇಂಗ್ಲೀಷಿನ ಸಾಲುಗಳನ್ನು ನಾನು ಶ್ರದ್ದೆಯಿಟ್ಟು ಹೇಳಿದೆ.ಆಗಲೆ ನಾನು ಅವರ ಕಣ್ಣುಗಳಲ್ಲಿ ಧನ್ಯತೆಯ ಭಾವನೆಯನ್ನು ಕಂಡಿದ್ದು.ನನಗಿಂತ ಸಂತಸ ಅವರು ಪಟ್ಟಿದ್ದರು.
ನಂತರದ ದಿನಗಳಲ್ಲಿಅವರ ತರಗತಿಗಳ ಪಾಠ.ಪ್ರತಿಯೊಂದು ಪಠ್ಯದ ಸನ್ನಿವೇಶಗಳಿಗೆ ತಮ್ಮನ್ನು ಅನುಕರಣೆಗೊಳಿಸುತ್ತಿದ್ದು ವಿಶೇಷ.ಒಂದು ರೀತಿಯ ಪರಕಾಯ ಪ್ರವೇಶ ಎಂದರೆ ತಪ್ಪಾಗಲಾರದು.ಗುಲಾಬಿ ಟಾಕೀಸು ಎಂಬ ಅದ್ಬತ ಕಥೆಯನ್ನು ವಿವರಿಸುವಾಗ ಅವರು ಅಭಿವ್ಯಕ್ತ ಪಡಿಸಿದ ಭಾಷೆಯ ಸರಳತೆ ಎಂತವನಿಗಾದರೂ ಅರ್ಥವಾಗದೆ ಇರುತ್ತಿರಲಿಲ್ಲ.ಕೆಲವರು ಕೀಟಲೆ.ತಲೆಹರಟೆ ಮಾಡಿದಾಗಲೂ ನಗುನಗುತ್ತಾ ಬೈದಿದ್ದು ಇನ್ನು ಹಸಿಯಾಗಿಯೇ ಇದೆ.ಅವರು ಯಾವಾಗಲೂ ಪುನಃ ಪುನಃ ಹೇಳುತಿದ್ದು ಒಂದೇ.ನಾಲ್ಕು ಗೋಡೆಗಳ ಮಧ್ಯೆ ಪಡೆದ ಶಿಕ್ಷಣ ಬದುಕಿನೊಂದಿಗೆ ಬರುವುದು ಅಲ್ಪ ದಿನ.ಆದರೆ ಮಾನವೀಯತೆಯ ಮೌಲ್ಯ,ಎಲ್ಲರನ್ನು ಪ್ರೀತಿಸುವ ಗುಣವಿದ್ದರೆ ಮಾತ್ರ ಬದುಕಿಗೊಂದು ಅರ್ಥ ಕೊಡಬಹುದು ಎಂದು ನಮಗೆ ಹೇಳಿದ ಕಿವಿಮಾತು.
ಕೆಲವೇ ದಿನಗಳಲ್ಲಿ ಇನ್ನಷ್ಟು ಹತ್ತಿರವಾಗಿದ್ದು ನಿನಾಸಂ ತರಬೇತಿ ಶಿಬಿರಗಳಲ್ಲಿ.ಅವರು ಎಲ್ಲರ ಹಾಗೆ ಇದ್ದವರಲ್ಲ.ಎಷ್ಟೋ ಮಂದಿ ಉಪನ್ಯಾಸಕರುಗಳು ಕಾಲೇಜಿನ ದಿನಚರಿ ಮುಗಿದ ಮೇಲೆ ಮನೆಯ ಕಡೆ ಹಾದಿ ಬೆಳೆಸುತ್ತಿದ್ದರು.ಆದರೆ ಇವರು ಪಯಣ ಬೆಳೆಸುತ್ತಿದ್ದು ಮಹಿಳಾ ಹಾಸ್ಟೇಲ್ ಕಡೆಗೆ.ನಾಟಕಗಳ ಬಗ್ಗೆ ಆಸಕ್ತಿ ಇದ್ದಂತ ಪ್ರತಿಭೆಗಳನ್ನು ಗುರುತಿಸಿ ತೆರೆಯ ಮೇಲೆ ಸುಂದರ ಪಾತ್ರ ಮತ್ತು ಪಾತ್ರಧಾರಿಗಳನ್ನು ತಯಾರು ಮಾಡಿದ ಹೆಗ್ಗಳಿಕೆ ಅವರದ್ದು.
ನಮ್ಮ ಹಾಸ್ಟೇಲಿನ ಪ್ರತಿ ವಿದ್ಯಾರ್ಥಿನಿಯ ಹೆಸರು ಅವರ ಬಾಯಲ್ಲಿ ನೆನಪುಳಿದಿತ್ತು.ಹಲವಾರು ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಹಣದಿಂದ ಬದುಕು ಕಟ್ಟಿದ್ದು ಮರೆಯುವ ಹಾಗಿಲ್ಲ.ಎಷ್ಟೋ ದಿನ ನಮ್ಮೊಟ್ಟಿಗೆ ಕುಳಿತು ಹಾಸ್ಟೇಲಿನಲ್ಲಿ ಊಟ ಮಾಡಿದ್ದು ಉಂಟು.ಕಾಲೇಜು ಮುಗಿಸುವ ಕೊನೆಯ ದಿನಗಳಲ್ಲಿ ನಾವೆಲ್ಲರೂ ಅವರ ಆಪ್ತರಾಗಿಯೇ ಬಿಟ್ಟೆವು. ಬದುಕಿನ ಸುಮಧುರ ಬಾಂಧವ್ಯಗಳನ್ನು ಬೆರೆಸಿದ್ದು.ಒಟ್ಟೊಟ್ಟಿಗೆ ಪ್ರೀತಿಯ ಗುರುವಾಗಿ,ಅದಕ್ಕಿಂತ ಮಿಗಿಲಾಗಿ ನಮ್ಮೆಲ್ಲರ ಗೆಳತಿಯಾಗಿ ದಾರಿಯಲ್ಲಿ ಜೊತೆಗೂಡಿದ್ದೆ ಮರೆತಿಲ್ಲ. ವಿದಾಯಕ್ಕೆ ಆರಂಭವೆನ್ನುವುದು ಮತ್ತೆ ಬರುವುದಿಲ್ಲವೆಂದು ಗೊತ್ತಿದ್ದರೂ ನಗುನಗುತಾ ಮೂರು ವರ್ಷ ಕಳೆದೆವು.ನಮ್ಮೆಲ್ಲರ ಪಾಲಿಗೆ ಮೂರ್ತ ನೀಡಿ ತಿದ್ದಿ ತೀಡಿದ ಅಚ್ಚುಮೆಚ್ಚಿನ ಗುರುಗಳವರು.
ಇಂದು ನಮ್ಮೆಲ್ಲರ ಎದುರು ಅವರಿಲ್ಲ. ನಾಲ್ಕು ಗೋಡೆಗಳ ಮಧ್ಯೆ ಮಾಡಿದ ತರಗತಿಗಳು ಇನ್ನು ಸಹ ಕಿವಿಯಲ್ಲಿ ಕೇಳಿದಅನುಭವಷ್ಟೇ.ಆದರೆ ಅವರ ನೆನಪುಗಳು ಹೃದಯ ಅಂಗಳದಲ್ಲಿ ಬೆರೆತಿರುವುದೆಂತೂ ಸತ್ಯ.ಸದಾ ಲವಲವಿಕೆಯಿಂದ ಕಾಲೇಜಿನ ಆವರಣದಲ್ಲಿ ಓಡಾಡಿದ ಹೆಜ್ಜೆ ಗುರುತುಗಳು ಕೇವಲ ಗುರುತಾಗಿಯೇ ಉಳಿದುಹೋಗಿವೆ.ಅವರ ಪುಟ್ಟ ಹೆಜ್ಜೆಗುರುತುಗಳಲ್ಲಿ ಕೇವಲ ನೆನಪುಗಳು ಮಾತ್ರ.ಇವೆಲ್ಲದುಇನ್ನು ನಿನ್ನೆ ಮೊನ್ನೆಯ ಕನವರಿಕೆಗಳು. ಕೊನೆ ಗಳಿಗೆಯಲ್ಲಿ ಭಯಾನಕ ಕಾಯಿಲೆ ಅವರನ್ನು ದೂರದಿಂದಲೇ ಜೀವ ಹಿಂಡಿತ್ತಲೇ ಇತ್ತು. ಸಾವನ್ನೇ ಜಯಿಸಿ ಬರುತ್ತೇನೆಂದು ಹೋರಾಟ ಮಾಡಿದ್ದು ಕೇವಲ ಪ್ರಯತ್ನವಾಗಿ ಉಳಿಯಿತು ಹೊರತು ಫಲಕಾರಿಯಾಗಲೇ ಇಲ್ಲ.
Like this:
Like ಲೋಡ್ ಆಗುತ್ತಿದೆ...
Posted in ಸುಮ್ಮನೆ ಬರೆದವು | ನಿಮ್ಮ ಟಿಪ್ಪಣಿ ಬರೆಯಿರಿ
ನಿಮ್ಮದೊಂದು ಉತ್ತರ